ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಸೂಚಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ2020(ಎನ್‌ಇಪಿ2020) ಅನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸುವುದು ಒಂದು ಸವಾಲಿನ ಕೆಲಸ. ಇದಕ್ಕಾಗಿ ಅಗತ್ಯ ಆಡಳಿತಾತ್ಮಕ ಸುಧಾರಣೆ ತರುವುದು, ಅವಶ್ಯ ಕಾನೂನು ತಿದ್ದುಪಡಿ ತರುವುದು, ಇವೆಲ್ಲದರ ಜತೆ ಎನ್‌ಇಪಿ2020ಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಎಲ್ಲ ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್‌ ರ‍್ಯಾಂಕ್‌ ಮತ್ತು ಪ್ರತಿ ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆಯುವುದು ಅನಿವಾರ್ಯವಾಗಿತ್ತು. ಈ ಎಲ್ಲ ಸವಾಲುಗಳು ಕಣ್ಣ ಮುಂದೆ ಇದ್ದರೂ ರಾಜ್ಯದ ಉನ್ನತ ಶಿಕ್ಷಣ ಸಚಿವನಾಗಿರುವ ನನಗೆ ಶೈಕ್ಷಣಿಕ ರಂಗದಲ್ಲಿ ಇಂತಹ ಮಹತ್ತರ ಬದಲಾವಣೆ ತರುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೆಂದು ತಿಳಿದಿದ್ದೇನೆ. ಎನ್‌ಇಪಿ2020  ಅನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದು, ಇಡೀ ದೇಶದಲ್ಲಿ ಈ ನೀತಿಯನ್ನು ಮೊಟ್ಟ ಮೊದಲಬಾರಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಬೇಕೆಂಬುದೇ ನನ್ನ ಮುಂದಿರುವ ಗುರಿಯಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ2020 – ಉದ್ದೇಶ ಮತ್ತು ಗುರಿ

21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿರುವ ಎನ್‌ಇಪಿ2020 ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಅಭಿವೃದ್ಧಿ ಸಂಬಂಧಿತ ಬೇಡಿಕೆಗಳನ್ನು ಈಡೇರಿಸುವ ಉದ್ದೇಶ ಹೊಂದಿದೆ. ನಮ್ಮ ಶಿಕ್ಷಣ ವಿನ್ಯಾಸದ ಎಲ್ಲ ಆಯಾಮಗಳನ್ನು ಪರಿಷ್ಕರಿಸಿ ಮರು ನಿರ್ಮಾಣ ಮಾಡುವ ಗುರಿ ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತದೆ. ದೇಶದ ಪ್ರಾಚೀನ ಪರಂಪರೆ ಹಾಗೂ ಸನಾತನ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ಈ ಶಿಕ್ಷಣ ವ್ಯವಸ್ಥೆಯ ದಾರೀದಿಪವಾಗಿದೆ. ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿರುವ ಸಮಾನವಾದ, ಸಮಾವಿಷ್ಟವಾದ ಹಾಗೂ ಬಹುತಳವಾದಗಳನ್ನು ನೆಲೆಗಟ್ಟಾಗಿ ಹೊಂದಿರುವ ತತ್ಪರರಾದ, ಉತ್ಪಾದಕರಾದ ಹಾಗೂ ಕೊಡುಗೆ ನೀಡಬಲ್ಲಂತಹ ಪ್ರಜೆಗಳನ್ನು ಸಜ್ಜುಗೊಳಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಉದ್ದೇಶವಾಗಿದೆ. ಈ ದೂರದೃಷ್ಟಿಯ ನೀತಿಯು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಿ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರ ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂನಿಯಲ್ಲಿರುವ ನಮ್ಮ ರಾಜ್ಯದಲ್ಲಿ ಈ ನೀತಿಯನ್ನು ತ್ವರಿತವಾಗಿ ಜಾರಿಗೆ ತರುವುದರಿಂದ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಳ್ಳುವುದು ಸಾಧ್ಯ ಎಂಬುದನ್ನು ಮನಮಂಡೆ.

ಕೈ ಸೇರಿದ ಕರಡು ಪ್ರತಿ

ರಾಷ್ಟ್ರೀಯ ಶಿಕ್ಷಣ ನೀತಿ2020 ಅನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ಇದ್ದ ಉತ್ಸಾಹ ಅದರ ಕರಡು ಪ್ರತಿ ಕೈ ಸೇರುತ್ತಿದ್ದಂತೆ ಇಮ್ಮುಡಿಯಾಯಿತು. ನೀತಿ ಪ್ರಕಟವಾಗುವ ಮೊದಲು ಮತ್ತು ನಂತರ ಕಾರ್ಯಪಡೆಯ ಜತೆ ನಡೆಸಿದ ಮಹತ್ತರ ಸಭೆಗಳು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು ನೆರವಾಯಿತು. ಸಲಹಾ ಸಮಿತಿ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ನಿರಂತರ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವತ್ತ ಹೆಚ್ಚಿನ ಗಮನ ಹರಿಸಿದೆ.

ಕಾರ್ಯಪಡೆಯ ರಚನೆ

ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ. ರಂಗನಾಥ್‌ ಅವರ ನೇತೃತ್ವದ 15 ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಿದೆ. ಅವರು ಸಲ್ಲಿಸಿದ ವರಿಯ ಕುರಿತು ಸಮಾಲೋಚನೆ ನಡೆಸಿ 2021-22ನೇ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಅಳವಡಿಸಲು ಯೋಜನೆ ರೂಪಿಸಿದೆ.

ಸಂಪುಟದಲ್ಲಿ ಅನುಮೋದನೆ

ದೇಶದಲ್ಲೇ ಮೊದಲ ಬಾರಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ಕುರಿತು ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಮೇಲೆ ತ್ವರಿತವಾಗಿ ಕಾರ್ಯ ನಿರ್ವಹಿಸುವತ್ತ ಗಮನ ಕೇಂದ್ರೀಕರಿಸಿದೆ.

ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ

ಎನ್‌ಇಪಿ2020ಯ ಸಮಗ್ರ ಅನುಷ್ಠಾನ ಹಾಗೂ ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗೆ ಅನುಗುಣವಾಗಿ ನಮ್ಮ ವಿಶ್ವ ವಿದ್ಯಾಲಯಗಳನ್ನು ಮರು ರೂಪಿಸಲು ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಹಾಗೂ ‘ನ್ಯಾಕ್‌’ ,ಮಾನ್ಯತೆ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮನಗಂಡೆ. ರಾಜ್ಯದಲ್ಲಿರುವ 430 ಕಾಲೇಜುಗಳಲ್ಲಿ 50 ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದಿದ್ದು ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 230 ಕಾಲೇಜುಗಳನ್ನು ನ್ಯಾಕ್‌ ವ್ಯಾಪ್ತಿಗೆ ತರುವ ಗುರಿಯೊಂದಿಗೆ ಪ್ರತಿ ವಿವಿ ವ್ಯಾಪ್ತಿಯಲ್ಲಿ ಇಬ್ಬರು ನ್ಯಾಕ್‌ ಸಂಯೋಜಕರನ್ನು ನೇಮಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆ ಮಾದರಿಯಲ್ಲೇ ವಿಜ್ಞಾನ ಬೋಧನೆಗೆ ಚಿಂತನೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕ್ರಮದಂತೆ ಎಂಜಿನೀಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ಗಳನ್ನು ಭೋದಿಸುವ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದೆ. ರಾಜ್ಯದಲ್ಲಿರುವ 220 ಎಂಜಿನೀಯರಿಂಗ್‌ ಕಾಲೇಜುಗಳಲ್ಲಿ 100 ಕಾಲೇಜುಗಳು ಅತ್ಯುತ್ತಮ ದರ್ಜೆಯ ಮೂಲಸೌಲಭ್ಯಗಳಿವೆ, ಆ ಕಾಲೇಜುಗಳಲ್ಲಿ ಬಿಎಸ್‌ಸಿ ಮಾದರಿಯ 4 ವರ್ಷಗಳ ವಿಜ್ಞಾನ ಬೋಧಿಸುವ ಸಾಧ್ಯತೆಯ ಬಗ್ಗೆ ಕಾರ್ಯಸೂಚಿ ರೂಪಿಸುವಂತೆ ಪ್ರೊ. ತಿಮ್ಮೇಗೌಡ ಅವರಿಗೆ ಸೂಚಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆ ಮಾದರಿಯಲ್ಲೇ ಎಂಜಿನಿನಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಬೋಧನೆಯಾಗಬೇಕು ಎಂದು ತಿಳಿಸಿದೆ.

ಎನ್‌ಇಪಿ2020 ಅನುಷ್ಠಾನಕ್ಕೆ ತಜ್ಞರ ಸಮಿತಿ ರಚನೆ

ಎನ್‌ಇಪಿ2020ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ವಿಷಯವಾರು ತಜ್ಷರ ಸಮಿತಿಗಳನ್ನು ರಚಿಸಿ ಜೂನ್‌ 30ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಈ ನೀತಿಯ ಅನುಷ್ಠಾನದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿರಲು ಬೆಂಬಲವಾಗಿ ನಿಂತ ನಮ್ಮ ನೆಚ್ಚಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನಾನು ಆಭಾರಯಾಗಿದ್ದೇನೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷರಾದ ಕಸ್ತೂರಿ ರಂಗನ್‌ ಅವರ ಮೆಚ್ಚುಗೆಯ ನುಡಿಗಳು ನನಗೆ ಇನ್ನಷ್ಟು ಹುರುಪು ತುಂಬಿದೆ.

Leave a Reply

ನಮ್ಮೊಂದಿಗೆ ಸ್ವಯಂಸೇವಕರಾಗಿ

© ಕೃತಿಸ್ವಾಮ್ಯ 2020 - ಡಾ. ಅಶ್ವಥ್ ನಾರಾಯಣ್ ಸಿ. ಏನ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.