
ನಾನಾಜಿ ದೇಶಮುಖ್ ಎಂಬ ಹೆಸರು ಭಾರತೀಯ ರಾಜಕೀಯ ಇತಿಹಾಸದಲ್ಲಿ ಸಂಘಟನಾ ಶಕ್ತಿ ಹಾಗೂ ಕಾರ್ಯಚತುರತೆಗೆ ಪ್ರಖ್ಯಾತಿ ಗಳಿಸಿದ ಹೆಸರು. ತಮ್ಮ ಅಮೋಘ ಸಾರ್ವಜನಿಕ ಸೇವೆಗಾಗಿ ಭಾರತರತ್ನ ಪಡೆದ ಅವರು ಭಾರತೀಯ ಜನಸಂಘ ಪಕ್ಷ ಮತ್ತು ಆರ್.ಎಸ್.ಎಸ್. ನ ಹಿರಿಯ ನಾಯಕರಾಗಿದ್ದವರು.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಅಕ್ಟೋಬರ್ 11, 1916 ರಲ್ಲಿ ಜನಿಸಿದ ನಾನಾಜಿ ಮನೆಯಲ್ಲಿ ಸಿರಿತನವಿಲ್ಲದಿದ್ದರೂ, ಓದುವ ಹಾಗೂ ಜ್ಞಾನದ ಹಂಬಲವಿದ್ದ ಅವರು ಬಾಲ್ಯ ಹಾಗೂ ಯೌವನದಲ್ಲಿ ಕಷ್ಟಪಟ್ಟು ದುಡಿದು ಹಲವು ವಿಚಾರಗಳಲ್ಲಿ ಜ್ಞಾನವನ್ನು ಸಂಪಾದಿಸಿದರು. ಬಾಲಗಂಗಾಧರನಾಥ ತಿಲಕರು ವೈಚಾರಿಕತೆಯಿಂದ ಪ್ರೇರಣೆಯಾಗಿ ದೇಶಸೇವೆ ಹಾಗೂ ಸಾಮಾಜಿಕ ಉತ್ಥಾನಕ್ಕೆ ಇಳಿದ ನಾನಾಜಿ ದೇಶಮುಖರು ಡಾ. ಹೆಡ್ಗೆವಾರ್ ಅವರ ಪ್ರೋತ್ಸಾಹದಿಂದ ಸಂಘದ ಶಾಖೆಗೆ ಪರಿಚಿತರಾದರು. ಇದು ಅವರ ಸಾರ್ವಜನಿಕ ರಂಗಕ್ಕೆ ಬುನಾದಿಯಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾದ ಅವರು ಸಂಘದ ಪ್ರಚಾರಕರಾಗಿ ಹಳ್ಳಿ ಹಳ್ಳಿಗಳಲ್ಲಿ ಸುತ್ತಿದವರು. ಜನಜೀವನದ ಬಗ್ಗೆ ಇವರಲ್ಲಿ ಇದ್ದ ಆಳವಾದ ಅರಿವು ಇವರನ್ನು ಭಾರತೀಯ ಜನಸಂಘ ಪಕ್ಷದಲ್ಲೂ ಗುರುತಿಸುವಂತೆ ಮಾಡಿತು.
ಜನಸಂಘದ ಆರಂಭದ ಕಾಲದಿಂದಲೂ ಅದರ ಜೊತೆಗಿದ್ದ ನಾನಾಜಿ ದೇಶಮುಖ್ ಪಕ್ಷದ ಕಾರ್ಯದರ್ಶಿ ಮತ್ತು ಖಜಾಂಚಿ ಆಗಿದ್ದವರು. ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಪತ್ರಿಕೆಗಳ ಸಂಪಾದನೆಯಲ್ಲಿ ತೊಡಗಿದ್ದ ಅವರಿಗೆ ದೇಶದ ನಾಡಿಮಿಡಿತದ ಆಳವಾದ ಅರಿವಿತ್ತು. ನಿಷ್ಕಾಮ ಕರ್ಮ ತತ್ವವನ್ನು ಬಲವಾಗಿ ನಂಬುವುದು ಮಾತ್ರವಲ್ಲದೆ, ಆ ತತ್ವಾನುಸಾರ ಸಾರ್ವಜನಿಕ ಸೇವೆಯಲ್ಲಿ ತೊಡಗಿದ ಇವರು ಸಮಾಜದ ಅಭ್ಯುದಯವನ್ನು ಬಯಸಿದ್ದರು. ಶಿಕ್ಷಣ ಹಾಗೂ ಸ್ವಾವಲಂಬಿ ಜೀವನದ ಮೌಲ್ಯಗಳಿಗೆ ಮಹತ್ವವನ್ನು ನೀಡುತ್ತಿದ್ದ ಅವರು ಅದಕ್ಕೆ ಪೂರಕವಾಗುವಂತೆ 1952 ರಲ್ಲಿ ದೇಶದ ಪ್ರಥಮ ಸರಸ್ವತಿ ಶಿಶು ಮಂದಿರವನ್ನು ಗೋರಖ್ ಪುರದಲ್ಲಿ ಇವರು ಸ್ಥಾಪಿಸಿದರು.
My humble tributes to Bharat Ratna Nanaji Deshmukh on his birth anniversary. An inspiration to many karyakartas like me, his social work including his exemplary contribution to the field of education like the setting up of the Saraswathi Shishu Mandir must be remembered. pic.twitter.com/iLb27JnORg
— Dr. Ashwathnarayan C. N. (@drashwathcn) October 11, 2020
ಇದೇ ಕಾಲಘಟ್ಟದಲ್ಲಿ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತವಾದ `ವನವಾಸಿ ಕಲ್ಯಾಣ’ ಆಶ್ರಮದ ಸೇವಾಕಾರ್ಯಗಳಲ್ಲೂ ಇವರ ಕೊಡುಗೆ ಅಪಾರ. ದೇಶಾದ್ಯಂತ ಸುಮಾರು ಒಂಭತ್ತೂವರೆ ಕೋಟಿಗೂ ಮಿಕ್ಕ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು, ವನವಾಸಿ ಜನಾಂಗಗಳ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿರುವ ಈ ಸಂಸ್ಥೆ ಬಡತನ, ಅಜ್ಞಾನ, ಮತಾಂತರ ಪಿಡುಗಿನ ವಿರುದ್ಧ ನಿಂತು ಹಲವು ಸೇವಾ ಕಾರ್ಯಕ್ರಮ ಮತ್ತು ವೈವಿಧ್ಯ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ. ಇದರೊಂದಿಗೆ, ಹಳ್ಳಿಗಳ ವಿಕಾಸದಲ್ಲಿ ನಂಬಿಕೆಯಿಟ್ಟು, ಉತ್ತರಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಮೊದಲ ಕುಲಪತಿಯಾದರು. ಇದು ದೇಶದ ಮೊದಲ ಗ್ರಾಮೀಣ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ನಾನಾಜಿ ದೇಶಮುಖರ ಜಯಂತಿಯಾದ ಇಂದು ಇವರ ಕೆಲವು ಅಮೂಲ್ಯ ಕೊಡುಗೆಗಳ ಬಗ್ಗೆ ಹೇಳಬಯಸುತ್ತೇನೆ. ಆರ್.ಎಸ್.ಎಸ್. ನ ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರ ಒಂದು ವಿಚಾರಗೋಷ್ಠಿಯಲ್ಲಿ ಭಾಗಿಯಾಗುವ ಅವಕಾಶ ನನಗೆ ಕೆಲವು ತಿಂಗಳ ಹಿಂದೆ ಒದಗಿ ಬಂತು. ‘ಒಳ್ಳೆಯ ಶಿಕ್ಷಣ ಸಂಸ್ಥೆಗಳು ಸಮಾಜದ ಆಭರಣಗಳು’ ಎಂದ ಅವರು ವಿದ್ಯಾಭಾರತಿಯ ಹಲವಾರು ಸೇವಾಕಾರ್ಯಗಳು ಹಾಗೂ ಸಾಧನೆಗಳ ಕುರಿತು ವಿವರಿಸಿದರು. ಆ ಮಾತುಗಳು ನನ್ನಲ್ಲಿ ಅಚ್ಚಳಿಯಾಗಿ ಉಳಿದಿದ್ದು, ನಾನಾಜಿ ದೇಶಮುಖರ ಜಯಂತಿಯಾದ ಇಂದು ನೆನಪಾಗುತ್ತಿವೆ. ಆ ಆನ್ಲೈನ್ ಸಂವಾದ ಕಾರ್ಯಕ್ರಮವನ್ನು ನೀವು ಇಲ್ಲಿ ವೀಕ್ಷಿಸಬಹುದು –
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವಾರ್ಷಿಕ ಸಂಸ್ಥಾಪನಾ ದಿನದ ಆಚರಣೆ, ‘ಪ್ರೇರಣಾ ದಿನ’ ದಲ್ಲಿ ಮಾನ್ಯ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಸಂವಾದ
ಸರಸ್ವತಿ ಶಿಶು ಮಂದಿರದ ರೂಪದಲ್ಲಿ ಮೊದಲಿಗೆ ಬಂದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಇಂದು 50ಕ್ಕೂ ಹೆಚ್ಚು ರಾಜ್ಯಮಟ್ಟದ ಅಥವಾ ಕ್ಷೇತ್ರಮಟ್ಟದ ಕಚೇರಿಗಳನ್ನು ಹೊಂದಿ ಜಗತ್ತಿನ ಅತಿ ದೊಡ್ಡ ಸರಕಾರೇತರ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ.
ವಿದ್ಯಾಭಾರತಿಯ ಆಶ್ರಯದಲ್ಲಿ ಇದೀಗ 20,000 ಕ್ಕೂ ಹೆಚ್ಚಿನ ಶಾಲೆಗಳುಶಾಲೆಗಳು ನಡೆಯುತ್ತಿದ್ದು, ಅವುಗಳಲ್ಲಿ 30 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೆ.ಜಿಯಿಂದ ಪಿ.ಜಿ.ಯವರೆಗೆ ಎನ್ನಬಹುದಾದ ಶಿಕ್ಷಣದ ಎಲ್ಲಾ ರಂಗಗಳಿಗೆ ವ್ಯಾಪಿಸಿರುವ ವಿದ್ಯಾಭಾರತಿಯು ತಾಂತ್ರಿಕ ಮತ್ತು ತರಬೇತಿ ಕೇಂದ್ರಗಳನ್ನು ಕೂಡಾ ಹೊಂದಿದೆ. ದೇಶದ ಎಲ್ಲ ರೀತಿಯ ಪ್ರದೇಶಗಳನ್ನು ವ್ಯಾಪಿಸಿರುವ ವಿದ್ಯಾಭಾರತಿಯು ದೇಶದಲ್ಲಿ ವಿದ್ಯಾರ್ಜನೆಗೆ ಪ್ರಮುಖ ಮಾಧ್ಯಮವಾಗಿ ನಿಂತಿದೆ.
ಸಾಮಾಜಿಕ ಕ್ಷೇತ್ರದಲ್ಲಿ ಸಮಾಜದ ಅಭ್ಯುದಯಕ್ಕೆ ಹೀಗೆ ವಿವಿಧ ರೂಪದಲ್ಲಿ ಸೇವೆ ಸಲ್ಲಿಸಿದ ನಾನಾಜಿ ರಾಜಕೀಯ ಕ್ಷೇತ್ರದಲ್ಲಿ ಕೂಡಾ ಕಾಂಗ್ರೆಸ್ಸೇತರ ಸರ್ಕಾರದ ಸಂಘಟನಾ ಶಕ್ತಿಗೆ ತನ್ನ ಚತುರತೆಯನ್ನು ಪ್ರದರ್ಶಿಸಿ ಅಲ್ಲಿಯೂ ಮಿಂಚಿದವರು. ಅನೇಕ ಕಾಂಗ್ರೆಸ್ಸೇತರ ನಾಯಕರ ನಿಕಟವರ್ತಿಯಾಗಿದ್ದ ಅವರು ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಗಳ ಹೊಂದಾಣಿಕೆಗೆ ಮುನ್ನುಡಿ ಬರೆದರು. ಹೀಗೆ ಸಾಮಾಜಿಕ-ರಾಜಕೀಯ ಕ್ಷೇತ್ರ ಎರಡರಲ್ಲೂ ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸಿದ ಸಮರ್ಪಕ ಹಾಗೂ ಅಪರೂಪದ ನಾಯಕರು ಇವರು. ನಿಷ್ಕಾಮ ಕರ್ಮ ಜೀವನ ತತ್ವವನ್ನು ಪಾಲಿಸುತ್ತಿದ್ದ ಅವರು ತುರ್ತು ಪರಿಸ್ಥಿತಿ ನಂತರದ 1977 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಬಲರಾಂಪುರದಿಂದ ಆಯ್ಕೆಯಾದರೂ ಜನತಾಪಕ್ಷ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ನಾನಾಜಿ ಅವರನ್ನು ಸಂಪುಟ ಸೇರುವಂತೆ ಪ್ರಧಾನಿ ಮೊರಾರ್ಜಿ ದೇಸಾಯಿ ಆಹ್ವಾನಿಸಿದಾಗ ನಯವಾಗಿ ನಿರಾಕರಿಸಿದರು.
ಅವರು ಅಂದು ಸುವರ್ಣಾಕ್ಷರಗಳಲ್ಲಿ ಬರೆದ ಮುನ್ನುಡಿಯು ಇಂದು ಕೂಡಾ ನಮಗೆ ಬಲವಾದ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ದಿಕ್ಸೂಚಿ ಒದಗಿಸಿದೆ. ನಾನಾಜಿ ದೇಶಮುಖರು ಅಂದು ಬಿತ್ತಿದ ಆ ಬೀಜದ ಫಲವನ್ನು ಇಂದು ನಾವು ಆರು ವರ್ಷಗಳ ಕಾಲ ನಿರಂತರವಾಗಿ ಕಾಂಗ್ರೆಸ್ಸೇತರ ಸರ್ಕಾರದ ದೇಶಸೇವೆ ಮೂಲಕ ಕಾಣುತ್ತಿದ್ದೇವೆ.
ಸಂಶೋಧನೆಯಲ್ಲಿ ಆಸಕ್ತಿ ಇದ್ದ ಅವರು, ದೆಹಲಿಯಲ್ಲಿ ದೀನದಯಾಳು ಸಂಶೋಧನಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ, ನೈರ್ಮಲ್ಯ ಮತ್ತು ಗುಡಿಕೈಗಾರಿಕೆಗಳ ಸಬಲೀಕರಣಕ್ಕೆ ಕೊಡುಗೆ ಸಲ್ಲಿಸಿದುದಕ್ಕೆ ಭಾರತರತ್ನ ನಾನಾಜಿ ದೇಶ್‍ಮುಖರು ಖ್ಯಾತರಾಗಿದ್ದಾರೆ. ಶಿಕ್ಷಣ, ಆರೋಗ್ಯ ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದು ಇವರ ವೈಶಿಷ್ಟ್ಯ. 1999 ರಲ್ಲಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಇವರಿಗೆ ರಾಜ್ಯಸಭಾ ಸದಸ್ಯತ್ವ ನೀಡಿ ಗೌರವಿಸಿತು.
ಆತ್ಮನಿರ್ಭರ ಭಾರತದ ನಿರ್ಮಾಣ ಸಾಕಾರವಾಗಬೇಕಾದರೆ ರಾಷ್ಟ್ರೀಯ ಸ್ವಾಭಿಮಾನದ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಪದ್ಧತಿ ನಮ್ಮ ಯುವ ಪೀಳಿಗೆಗೆ ದೊರಕಬೇಕು ಎಂದು ತಮ್ಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ ಮಾನ್ಯ ದತ್ತಾತ್ರೇಯ ಹೊಸಬಾಳೆ ಅವರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿ ಹಾಗೂ ವನವಾಸಿ ಕಲ್ಯಾಣ ಸಂಸ್ಥೆಗಳು ಮಾಡುತ್ತಿರುವ ಕೆಲಸ-ಕಾರ್ಯಗಳು ನಿಜಕ್ಕೂ ಶ್ಲಾಘನೀಯ.
ನಾನಾಜಿ ದೇಶಮುಖರು ಕನಸು ಕಂಡ ರಾಷ್ಟ್ರೀಯ ವಿಚಾರಧಾರೆಗಳನ್ನು ಒಳಗೊಂಡ ಶಿಕ್ಷಣ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕ ರಂಗದಲ್ಲಿ ದೇಶ ಹಾಗೂ ಭಾರತೀಯರು ಮುನ್ನುಗ್ಗಲು ಹಾಗೂ ಒಂದು ಸ್ವಾವಲಂಬಿ ಭಾರತದ ನಿರ್ಮಾಣವಾಗಲು ಅವರ ವಿಚಾರಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೂ ಪ್ರೇರಣೆ ನೀಡಿದೆ. ಭಾರತರತ್ನ ನಾನಾಜಿ ದೇಶಮುಖರ ಜಯಂತಿಯಾದ ಇಂದು ಅವರ ವಿಚಾರಗಳನ್ನು ನೆನೆದು, ನಮ್ಮ ಜೀವನದಲ್ಲಿ ಅಳವಡಿಸಿ ದೇಶದ ಪ್ರಗತಿಯತ್ತ ಶ್ರಮವಹಿಸಲು ಬದ್ಧರಾಗೋಣ. ಈ ನಿಟ್ಟಿನಲ್ಲಿ ನಾನಾಜಿ ದೇಶಮುಖರ ಜೀವನ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪ್ರೇರಣೆ ನೀಡಲಿ.